ಕಲಾವಿದರ ಕಲ್ಪನೆಯಲ್ಲಿ ಕುವೆಂಪು

ಕಲಾವಿದರ ಕಲ್ಪನೆಯಲ್ಲಿ ಕುವೆಂಪು

ಪ್ರಸ್ತಾವನೆ

ಕುವೆಂಪು

‘ಕುವೆಂಪು’ ಕಾವ್ಯನಾಮದಿಂದ ಸರ್ವಜನ ಪರಿಚಿತರಾಗಿರುವ ಡಾ. ಕೆ.ವಿ. ಪುಟ್ಟಪ್ಪ ಅವರು ಯುಗಪ್ರಜ್ಞೆಯ ಮಹಾಕವಿ. ಅವರ ಬದುಕು ಬರೆಹ ಬೇರೆ ಬೇರೆಯಲ್ಲ, ಅಭಿನ್ನ. ಅವರದು ‘ಸಹ್ಯಾದ್ರಿ ಪ್ರತಿಭೆ’. ಅತ್ತ ಸಮುದ್ರದಂತೆ ಆಳ, ಗಂಭೀರ; ನಡುವಣ ನಿತ್ಯ ಚೈತನ್ಯಮಯ ಅರಣ್ಯದಂತೆ ಸಾಂದ್ರ; ಹಾಗೂ ಪರ್ವತಶ್ರೇಣಿ ಶಿಖರಗಳಂತಹ ಔನ್ನತ್ಯವುಳ್ಳ ವ್ಯಕ್ತಿತ್ವ ಮತ್ತು ಪ್ರತಿಭೆ. ‘ರಸಋಷಿ’ ಎಂದು ಪ್ರಸಿದ್ಧರಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇಪ್ಪತ್ತನೆಯ ಶತಮಾನದ ಎರಡನೆಯ ದಶಕದಿಂದ ಬರೆಯತೊಡಗಿದ ಅವರು ಭಾವಗೀತೆ, ನಾಟಕ, ಕಥೆ, ಪ್ರಬಂಧ, ಕಾದಂಬರಿ, ಮಹಾಕಾವ್ಯ ಎಂದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ‘ಕುವೆಂಪು ಮಾದರಿ’ ಎನ್ನಬಹುದಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಮಹಾಕಾವ್ಯ ‘ಶ್ರೀರಾಮಾಯಣದರ್ಶನಂ’ ಇಂದಿಗೂ ಏಕೈಕ ಮೇರುಕೃತಿಯಾಗಿ ಉಳಿದಿದೆ. ಆಧುನಿಕ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರ ಪ್ರಭಾವ, ಹಲವು ಸಾಹಿತ್ಯ ಚಳವಳಿಗಳು ಬಂದು ಹೋದರೂ, ಶತಮಾನದ ಎಲ್ಲ ಕವಿಗಳ ಮೇಲೆ, ಬರೆಹಗಾರರ ಮೇಲೆ ಆಗಿದೆ. ದ.ರಾ. ಬೇಂದ್ರೆಯವರು ಅವರನ್ನು ಯುಗದ ಕವಿ, ಜಗದ ಕವಿ ಎಂದದ್ದು ಕೇವಲ ಶ್ಲಾಘನೆಯ ಮಾತಲ್ಲ.

ಕುವೆಂಪು ಅವರು 29 ಡಿಸೆಂಬರ್ 1904ರಂದು ಸಹ್ಯಾದ್ರಿಯ ಮಡಿಲಲ್ಲಿ ತಾಯಿಯ ತವರು ಹಿರೇಕೊಡಿಗೆಯಲ್ಲಿ ಜನಿಸಿದರು. ತಂದೆಯ ಊರು ಕುಪ್ಪಳಿ. ದಟ್ಟ ಅರಣ್ಯದ ಮಲೆನಾಡಿನಲ್ಲಿ ಜನಿಸಿದರು ಎಂಬುದೂ ಅರ್ಥಪೂರ್ಣ. ಅವರು ಪ್ರಕೃತಿಕವಿ ಎಂದು ಪ್ರಸಿದ್ಧರಾಗಿದ್ದಾರೆ. ಅವರ ಕೃತಿಗಳಲ್ಲೆಲ್ಲ ನಿಸರ್ಗ ಸೌಂದರ್ಯದ ಹಾಗೂ ಮಲೆನಾಡ ಬದುಕಿನ ಸೂಕ್ಷ್ಮ ವಿವರಗಳು ತುಂಬಿವೆ. ಆದರೆ ಅದು ಕೇವಲ ಸೌಂದರ್ಯಾರಾಧನೆಯಲ್ಲ. “ಅವರ ವ್ಯಕ್ತಿತ್ವದ ಬೇರು – ಬುಡದಂತೆ ಅವರನ್ನು ವ್ಯಾಪಿಸಿದ ನಿಸರ್ಗ ಪ್ರೀತಿ ಕೇವಲ ಸೌಂದರ್ಯನಿಷ್ಠವಾದುದಲ್ಲ, ಅದನ್ನೂ ಮೀರಿದ ಒಂದು ಆಧ್ಯಾತ್ಮಿಕ ಅನ್ವೇಷಣೆಯ ಹಾಗೂ ಸಾಕ್ಷಾತ್ಕಾರದ ಅನುಭವ ಕೂಡ” ಎಂದಿದ್ದಾರೆ, ಕುವೆಂಪು ಅವರ ಆತ್ಮೀಯ ಶಿಷ್ಯರೂ, ಕವಿ, ವಿಮರ್ಶಕರೂ ಆದ ಡಾ. ಜಿ.ಎಸ್. ಶಿವರುದ್ರಪ್ಪನವರು. ಕುವೆಂಪು ಕವನಗಳೇ ಇದಕ್ಕೆ ಉತ್ತಮ ನಿದರ್ಶನಗಳಾಗುತ್ತವೆ.

ವಿದ್ಯಾರ್ಥಿದೆಸೆಯಿಂದ ಶ್ರೀ ರಾಮಕೃಷ್ಣಮಠದ ಸಂಬಂಧ ಹೊಂದಿದ್ದ ಅವರಿಗೆ ಶ್ರೀರಾಮಕೃಷ್ಣರು, ವಿವೇಕಾನಂದರು, ಗಾಂಧೀಜಿ ಇವರ ಆದರ್ಶ, ಚಿಂತನೆ, ವಿಚಾರಗಳು ರಕ್ತಗತವಾದವು. ಹೀಗಾಗಿ ಅವರದು ಸಿದ್ಧ ಸಂಪ್ರದಾಯಗಳನ್ನು ಒಪ್ಪದ ತೆರೆದ ಮನಸ್ಸು. ಜಾತಿವ್ಯವಸ್ಥೆ, ಮೂಢನಂಬಿಕೆಗಳು, ಸಾಂಸ್ಥಿಕ ಮತಧರ್ಮಗಳನ್ನು ಅವರು ನಿರಾಕರಿಸಿದರು. ವೈಜ್ಞಾನಿಕ ಪ್ರಗತಿಯಾದಷ್ಟೂ, ಗ್ರಾಮೀಣ ಪ್ರದೇಶದ ಅಜ್ಞಾನ ಜನ್ಯ ಮೂಢನಂಬಿಕೆಗಳಿರಲಿ, ವಿದ್ಯಾವಂತ ನಗರವಾಸಿಗಳಲ್ಲೂ ಮೌಢ್ಯ ಹೆಚ್ಚುತ್ತಿರುವ ಕಾಲದಲ್ಲಿ, ಅಧ್ಯಾತ್ಮವನ್ನು ಹೊರತುಪಡಿಸದ, ಕುವೆಂಪು ಅವರ ವೈಚಾರಿಕ ನಿಲುವುಗಳು ಹೆಚ್ಚು ಪ್ರಸ್ತುತವಾಗುತ್ತವೆ.

ರಾಜಪ್ರಭುತ್ವವನ್ನು ವಿರೋಧಿಸಿದ ಅವರು ಸರ್ವಸಮಾನತೆಯನ್ನು ಪ್ರತಿಪಾದಿಸಿದರು. ಅವರ ಎರಡು ಕಾದಂಬರಿಗಳೂ ಟಾಲ್ಸ್‍ಟಾಯ್ ಕೃತಿಗಳಂತೆ ಕ್ಲಾಸಿಕ್‍ಗಳಾಗಿವೆ. ಅಲ್ಲಿಯ ಪಾತ್ರಗಳಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಮಲೆನಾಡಿನ ಹೊಲಗದ್ದೆಗಳಲ್ಲಿನ ಜೀತದಾಳುಗಳು, ಅವರು ಯಾವುದೇ ಜಾತಿಯವರಿರಲಿ, ನೋವು ಸಂಕಟ ಬವಣೆಗಳನ್ನು ಸಹಿಸುತ್ತ ಬದುಕುವ ಬಗೆಯೂ, `ಶ್ರೀ ರಾಮಾಯಣದರ್ಶನಂ’ ನ ರಾಮ, ಸೀತೆ, ರಾವಣಾದಿ ಪಾತ್ರಗಳಷ್ಟೆ ಮಹತ್ವಪೂರ್ಣವಾದುವುಗಳು. ಕುವೆಂಪು ‘ಶ್ರೀ ಸಾಮಾನ್ಯ’ನನ್ನು ಕಂಡರಿಸಿದರು.

ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಪಾಶ್ಚಾತ್ಯ ಸಾಹಿತ್ಯ ಪ್ರಭಾವ ಭಾರತದ ಎಲ್ಲ ಭಾಷೆಗಳ ಮೇಲಾಯಿತಷ್ಟೆ. ವಾಸ್ತವವಾದೀ ಸಾಮಾಜಿಕ ನಾಟಕಗಳು ಜನಪ್ರಿಯವಾಗಿದ್ದ ಕಾಲದಲ್ಲಿ, ಪ್ರತಿಮಾ ವಿಧಾನದ ಕಾವ್ಯನಾಟಕಗಳನ್ನು ರಚಿಸಿದರು. ಅವು ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು, ಕಾರಣವಾದ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ನಿತ್ಯಸತ್ಯದ ದರ್ಶನ ಧ್ವನಿಗೂ ಕಾವ್ಯ ಪ್ರತಿಮೆಗಳಾಗುತ್ತವೆ. ಎಲ್ಲೋ ಒಂದೆಡೆ ಜನಮನದ ನರಗಳನ್ನು ಮಿಡಿಯುತ್ತವೆ.

ಕುವೆಂಪು ಅವರದು ಕಾಲದ ಸೀಮಿತವಲಯವನ್ನು ಮೀರಿದ ಸಾರ್ವಕಾಲಿಕ ಸಾರ್ವದೇಶಿಕ ಸಮಷ್ಟಿ ದೃಷ್ಟಿ. ಅವರ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯ ಆ ಪೂರ್ಣದೃಷ್ಟಿಯ ದರ್ಶನ ಪ್ರತಿಮೆಯೇ ಆಗಿದೆ. ಜೀವಿಗೆ ಸ್ವಾತಂತ್ರ್ಯವಿತ್ತು ವಿಶ್ವನಿಯತಿಗೆ ಒಳಪಡಿಸಿರುವ ವಿಶ್ವವ್ಯಾಪಿಯಾದ ವಿರಾಟ್ ಮನಸ್ಸು ಎಂಬುದಿದೆ, ಎನ್ನುತ್ತಾರೆ ಕುವೆಂಪು. ಎಲ್ಲ ಜೀವಿಗಳೂ ದೈವೀಪ್ರಜ್ಞೆಯತ್ತ ಸಾಗುವವೆ. ಆದ್ದರಿಂದ ಪಾಪಿಗೂ ಮನಃಪರಿವರ್ತನೆಯಾಗಿ ಉದ್ಧಾರವಾಗುವುದಿದೆ. ಆ ವಿಕಸನದ ದರ್ಶನ ಮಹಾಕಾವ್ಯದಲ್ಲಿದೆ. ಆ ಕೃತಿ ಮಹಾಕಾವ್ಯದ ಕಲಾತ್ಮಕತೆ, ವೈಜ್ಞಾನಿಕ ದೃಷ್ಟಿ, ದಾರ್ಶನಿಕ ದೃಷ್ಟಿಗಳ ತ್ರಿವೇಣಿ ಸಂಗಮ.

ಕುವೆಂಪು ಅವರು ತಮ್ಮ ಅಂತಿಮ ವರ್ಷಗಳಲ್ಲಿ ತಮ್ಮ ಬದುಕಿನ ಸಂದೇಶವೆಂದರೆ ‘ವಿಶ್ವಮಾನವ ಸಂದೇಶ’ ಎಂದರು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಆದಿಕವಿ ಪಂಪನ ವಾಣಿಯನ್ನು ಉದ್ಧರಿಸಿ ಹೇಳಿದರು. ಸರ್ವ ಸಮಾನತೆ, ಸರ್ವೋದಯ, ಸಮನ್ವಯ ತತ್ವಗಳನ್ನು ವಿವರಿಸಿದರು. ಆ ಮತ ಈ ಮತಗಳ ಕಬಂಧ ಬಂಧಕ್ಕೆ ಒಳಗಾಗದೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟು ಮತಗಳಿರಲಿ ಎಂದರು. ಅಧ್ಯಾತ್ಮಿಕತೆಯನ್ನು ಎತ್ತಿಹಿಡಿದರು. ವ್ಯಕ್ತಿ ಎಲ್ಲ ಬಗೆಯ ಸಾಮಾಜಿಕ ಮತೀಯ ಸಂಕುಚಿತತೆಗಳಿಂದ ಮುಕ್ತನಾಗಿ ವಿಶ್ವಮಾನವನಾಗಲಿ ಎಂದು ಹಾರೈಸಿದರು. ಕುವೆಂಪು ಅವರು 1994 ನವೆಂಬರ್ 10ರಂದು ತಾವು ಪ್ರೀತಿಸಿದ ನಿಸರ್ಗದಲ್ಲಿ ಲೀನವಾದರು.

ಕುವೆಂಪು ಅವರು ಸಾಮಾನ್ಯ ರೈತಕುಟುಂಬದಲ್ಲಿ ಜನಿಸಿ, ಪಾಶ್ಚಾತ್ಯ ಪೌರ್ವಾತ್ಯ ಜ್ಞಾನವನ್ನು ಅರಗಿಸಿಕೊಂಡು ಎತ್ತರಕ್ಕೆ ಬೆಳೆದರು. ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ ಉನ್ನತಸ್ಥಾನಗಳಿಗೇರಿದರು. ಅವರಿಗೆ ಮೈಸೂರು, ಕರ್ನಾಟಕ, ಬೆಂಗಳೂರು, ಗುಲ್ಬರ್ಗಾ, ಮಂಗಳೂರು, ಹಂಪಿ, ಕಾನ್ಪುರ, ಸ್ಯಾನ್‍ಫ್ರಾನ್ಸಿಸ್ಕೋದ ಕಲಾ ಮತ್ತು ಸಾಂಸ್ಕøತಿಕ ವಿಶ್ವ ಅಕಾಡೆಮಿಗಳ ಗೌರವ ಡಾಕ್ಟರೇಟ್ ಪದವಿಗಳು ಸಂದುವು. ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮತ್ತು ಫೆಲೋಷಿಪ್, ಜ್ಞಾನಪೀಠ ಪ್ರಶಸ್ತಿ, ಪದ್ಮವಿಭೂಷಣ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಮತ್ತು ಕರ್ನಾಟಕ ರತ್ನ ಗೌರವ ಪ್ರಶಸ್ತಿಗಳಿಗೆ ಪಾತ್ರರಾದರು. ಅವರು ಜನವiನದಲ್ಲಿ ಚಿರಸ್ಮರಣೀಯ ‘ರಸಋಷಿ’ಯಾಗಿ ಉಳಿದಿದ್ದಾರೆ.

ಸಾಹಿತ್ಯ ಚಿತ್ರಸಂಪುಟ
ಸಾಹಿತ್ಯ ಹಾಗೂ ಶಾಸ್ತ್ರಕೃತಿಗಳಿಗೆ ಸಾಂದÀರ್ಭಿಕ (ಇಲ್ಲುಸ್ಟ್ರೇಷನ್) ಮತ್ತು ವಿವರಣಾತ್ಮಕ ಚಿತ್ರರಚನೆ ಮಾಡುವ ಪರಂಪರೆ ಬಹು ಹಿಂದಿನಿಂದಲೂ ಬಂದಿದೆ. ಓಲೆಗರಿ, ಭೂರ್ಜಪತ್ರ ಗ್ರಂಥಗಳಲ್ಲಿ ರೇಖಾಚಿತ್ರಗಳು, ಸ್ವಯಂ ಪೂರ್ಣ ಕಲಾಕೃತಿಯಾಗುವ ವರ್ಣಚಿತ್ರಗಳೂ ಇವೆ. ಈ ಹಸ್ತಪÀ್ರತಿ ಚಿತ್ರ ಪರಂಪರೆ ಮುಂದೆ ಚಿಕಣಿಚಿತ್ರ (ಮಿನಿಯೇಚರ್) ಪರಂಪರೆಗೂ ಕಾರಣವಾಯಿತು. ಮುದ್ರಣ ಬಂದ ನಂತರ ಪಾಶ್ಚಾತ್ಯರಲ್ಲಿ ಹಾಗೂ ಭಾರತದಲ್ಲೂ ಸಾಂದರ್ಭಿಕ ಚಿತ್ರರಚನೆ ಸಾಮಾನ್ಯವಾಯಿತು. ಆಧುನಿಕ ಕಾಲದಲ್ಲೂ ಪ್ರಸಿದ್ಧ ಕಲಾವಿದರು ಚಿತ್ರರಚನೆ ಮಾಡಿರುವುದುಂಟು. ಕೆ. ವೆಂಕಟಪ್ಪನವರು ಕಾಳಿದಾಸನ ಶಾಕುಂತಲ ನಾಟಕ, ಕುವೆಂಪು ಅವರ ಏಕಲವ್ಯ ನಾಟಕವನ್ನು ಓದಿ ಸ್ವಯಂಪೂರ್ಣ ಉಬ್ಬು ಶಿಲ್ಪ ರಚನೆ ಮಾಡಿದ್ದಾರೆ. ಕೆ.ಕೆ. ಹೆಬ್ಬಾರರು ತುಲಸೀ ರಾಮಾಯಣಕ್ಕೆ ರೇಖಾಚಿತ್ರ ರಚಿಸಿದ್ದಾರೆ. ಎಸ್. ಜಿ. ವಾಸುದೇವ್ ಅವರು ಬೇಂದ್ರೆ, ಅಡಿಗ, ಎ.ಕೆ. ರಾಮಾನುಜನ್ ಅವರ ಕವನಗಳಿಗೆ ಪ್ರತಿಸ್ಪಂದನ ರೂಪದ ಚಿತ್ರಗಳನ್ನು ರಚಿಸಿದ್ದಾರೆ. ಪಿ.ಆರ್. ತಿಪ್ಪೇಸ್ವಾಮಿಯವರು ಕುವೆಂಪು ಕವನಗಳನ್ನು ಓದಿ, ಕುಪ್ಪಳಿ ಪ್ರದೇಶಕ್ಕೆ ಹೋಗಿ ದೃಶ್ಯಾನುಭವಗಳನ್ನು ಜಲವರ್ಣದಲ್ಲಿ ಸ್ಥಳದಲ್ಲೇ ರಚಿಸಿದ್ದಾರೆ. ಇವೆಲ್ಲ ಸಾಂದರ್ಭಿಕ ಚಿತ್ರಗಳಲ್ಲ. ಸ್ವತಂತ್ರ ಕಲಾಕೃತಿಗಳೇ ಆಗುತ್ತವೆ.

ಕೆಲವು ಪಾಶ್ಚಾತ್ಯ ಸೌಂದರ್ಯಮೀಮಾಂಸಕಾರರು, ಕಲಾವಿಮರ್ಶಕರು, ಭಾಷಾ ವಿಜ್ಞಾನಿಗಳು ಇಂತಹ, ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಮಾಡುವ ರೂಪಾಂತರವನ್ನು ಭಾಷಾಂತರವೆಂದೇ ಪರಿಗಣಿಸಿದ್ದಾರೆ. ಪ್ರಸಿದ್ಧ ಭಾಷಾ ವಿಜ್ಞಾನಿ ರೋಮನ್ ಜೇಕಬ್‍ಸನ್ ಇದರ ಬಗ್ಗೆ ವಿವೇಚಿಸಿದ್ದಾನೆ. ಪ್ರತಿಯೊಂದು ಭಾಷೆಗೂ ವಿಶಿಷ್ಟ ‘ಸಂಜ್ಞಾ ವ್ಯವಸ್ಥೆ’ (ಸೈನ್ ಸಿಸ್ಟಂ) ಇರುತ್ತದೆ. ಒಂದು ಭಾಷೆಯ ಸಂಜ್ಞಾವ್ಯವಸ್ಥೆಯಿಂದ ಇನ್ನೊಂದು ಭಾಷೆಯ ಸಂಜ್ಞಾ ವ್ಯವಸ್ಥೆಗೆ ‘ಅರ್ಥ’ವನ್ನು ಸಂವಹನ ಮಾಡುವಲ್ಲಿ ಭಾಷಾತೀತವಾದ ಅನೇಕ ವಿಷಯಗಳಿರುತ್ತವೆ. ಭಾಷೆ ಸಾಂದರ್ಭಿಕ (ಕಾನಟೆಕ್ಷುಅಲ್) ಮಾತ್ರವಲ್ಲ, ಸಂಸ್ಕøತಿಬದ್ಧ (ಕಲ್ಚರ್ ಸ್ಪೆಸಿಫಿಕ್). ಕುವೆಂಪು ಅವರು ಇಂಗ್ಲಿಷ್‍ನಲ್ಲಿ ಕವನ ರಚಿಸುವುದನ್ನು ಬಿಟ್ಟು ಕನ್ನಡದಲ್ಲಿ ಬರೆಯಲು ಸಂಸ್ಕøತಿ ಮತ್ತು ಪರಂಪರೆಗೆ ಸಂಬಂಧಿಸಿದ ಕಾರಣಗಳು ಬಹು ಮುಖ್ಯವಾದುವು. ಭಾಷೆಯ ಶಬ್ದಗಳಿಗೆ ಭಾಷಾಂತರಿಸಲಾಗದ ಅನೇಕ ಅರ್ಥಛಾಯೆಗಳು, ಅರ್ಥಸಾಹಚರ್ಯೆಗಳು (ಅಸೋಸಿಯೇಷನ್ ಆಫ್ó ಮೀನಿಂಗ್ಸ್), ಸಾಂದರ್ಭಿಕ ಇಂಗಿತಾರ್ಥಗಳು (ರಿಜಿಸ್ಟರ್ಸ್) ಇರುತ್ತವೆ. ಕುವೆಂಪು ಶಬ್ದಗಳಿಗೆ ಭಾವಕೋಶ ಇರುತ್ತದೆ ಎಂದುದು ಈ ದೃಷ್ಟಿಯಿಂದಲೆ. ಜೇಕಬ್‍ಸನ್ ಮೂರು ಬಗೆಯ ಭಾಷಾಂತರಗಳನ್ನು ಹೇಳಿದ್ದಾನೆ. ಒಂದು, ಅಂತರ್ – ಭಾಷಾ ಅನುವಾದ (ಇಂಟ್ರಾಲಿಂಗ್ವಲ್ ಟ್ರಾನ್ಸ್‍ಲೇಷನ್). ಹಳೆಗನ್ನಡದಿಂದ ಹೊಸಗನ್ನಡಕ್ಕೆ ಅನುವಾದ ಮಾಡಿದಂತೆ, ಎನ್ನೋಣ. ಎರಡು, ಅಂತರ-ಭಾಷಾ ಅನುವಾದ (ಇಂಟರ್‍ಲಿಂಗ್ವುಅಲ್ ಟ್ರಾನ್ಸ್‍ಲೇಷನ್). ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದ ಮಾಡುವುದು. ಮೂರು, ಅಂತರ – ಸಂಜ್ಞಾ ಅನುವಾದ (ಇಂಟರ್‍ಸೆಮಿಯೋಟಿಕ್ ಟ್ರಾನ್ಸ್‍ಲೇಷನ್). ಒಂದು ಸಂಜ್ಞಾ ವ್ಯವಸ್ಥೆಯಿಂದ, ಎಂದರೆ ಒಂದು ಮಾಧ್ಯಮದಿಂದ ಇನ್ನೊಂದು ಸಂಜ್ಞಾವ್ಯವಸ್ಥೆಗೆ ಅನುವಾದ. ‘ಕುವೆಂಪು: ಸಾಹಿತ್ಯ ಚಿತ್ರ ಸಂಪುಟ’ ಈ ಬಗೆಯದು. ಶಬ್ದ ಮಾಧ್ಯಮದ ಸಂಜ್ಞಾವ್ಯವಸ್ಥೆಯಿಂದ ದೃಶ್ಯ ಮಾಧ್ಯಮದ ಸಂಜ್ಞಾವ್ಯವಸ್ಥೆಗೆ ರೂಪಾಂತರಿಸುವುದು (ಟ್ರಾನ್ಸ್‍ಮ್ಯುಟೇಷನ್). ಕುವೆಂಪು ಅವರ ಸಣ್ಣಕಥೆಯನ್ನು, ಕಾದಂಬರಿಯನ್ನು ನಾಟಕಕ್ಕೆ ಪರಿವರ್ತಿಸಿದಾಗಲೂ, ರಾಮಾಯಣದರ್ಶನಂ ಭಾಗಗಳನ್ನು ನೃತ್ಯಕ್ಕೆ ಸಂಯೋಜಿಸಿದಾಗಲೂ ರೂಪಾಂತರವಾಗುತ್ತದೆ.

ಈ ಅನುವಾದ ಮತ್ತು ರೂಪಾಂತರ ಪ್ರಕ್ರಿಯೆ ಕಲೆ ಮತ್ತು ಸೌಂದರ್ಯಮೀಮಾಂಸೆಗೂ ಸಂಬಂಧಿಸಿದೆ. ಪ್ರತಿಭಾನ ಅಥವಾ ಅಂತರ್‍ಬೋಧೆ (ಇಂಟ್ಯೂಷನ್) ಮತ್ತು ಅಭಿವ್ಯಕ್ತಿ (ಎಕ್ಸ್‍ಪ್ರೆಷನ್) ಗಳಿಗೆ ಸಂಬಂಧಿದಂತೆ ಹೊಸ ವಿಚಾರಗಳನ್ನು ಹೇಳಿದ ಕ್ರೋಚೆ `ದಿ ಈಸ್ಥೆಟಿಕ್’ ಗ್ರಂಥÀದಲ್ಲಿ ಭಾಷಾಂತರ/ರೂಪಾಂತರದ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ. ಅವನ ಪ್ರಕಾರ: “ಭಾಷಾಂತರವೆಂಬುದು ಅಸಾಧ್ಯ. ಒಂದು ಭಾವಾಭಿವ್ಯಕ್ತಿಯನ್ನು ಇನ್ನೊಂದು ರೂಪದಲ್ಲಿ ಕೊಡಬಹುದೆನ್ನುವುದು ನೀರನ್ನು ಬೇರೆ ಬೇರೆ ಆಕಾರದ ಪಾತ್ರೆಗಳಲ್ಲಿ ಹಾಕಿದರೆ ಪಾತ್ರೆಗಳ ವಿಭಿನ್ನರೂಪ ಪಡೆÀಯುತ್ತದೆ ಎಂದ ಹಾಗೆ. ಈಗಾಗಲೇ ಸೌಂದರ್ಯ ದೃಷ್ಟಿಯಿಂದ ಕಲಾತ್ಮಕವಾಗಿ ರೂಪಧಾರಣೆ ಮಾಡಿರುವುದಕ್ಕೆ ಬೇರೊಂದು ತರ್ಕಬದ್ಧರೂಪ ನೀಡಬಹುದಾದರೂ ಆ ಮೂಲ ಸೌಂದರ್ಯಾತ್ಮಕ ರೂಪವನ್ನು ರೂಪಾಂತರಗೊಳಿಸುವುದು ಸಾಧ್ಯವಿಲ್ಲ. ಏಕೆಂದರೆ ಆ ಮೂಲರೂಪ ಅಭಿವ್ಯಕ್ತಿಯ ಅವಿನಾಭಾಗ. ಆದ್ದರಿಂದ ಪ್ರತಿಯೊಂದು ಭಾಷಾಂತರವೂ ಮೂಲಕೃತಿಯ ಸೌಂದರ್ಯವನ್ನು ಮಸುಳಿಸುತ್ತದೆ ಅಥವಾ ಕೆಡಿಸುತ್ತದೆ. ಇಲ್ಲವೆ, ಭಾಷಾಂತರಕಾರನ ವ್ಯಕ್ತಿಗತ ಅನಿಸಿಕೆಗಳು, ಮನೋಮುದ್ರಿಕೆಗಳು ಅಭಿವ್ಯಕ್ತಿ ಪ್ರಕ್ರಿಯೆಯ ಮೂಸೆಯಲ್ಲೆ ಕರಗಿ ಮಿಶ್ರಣಗೊಂಡು ಮೂಲಕ್ಕಿಂತ ಭಿನ್ನವಾದ ಹೊಸತೊಂದು ಅಭಿವ್ಯಕ್ತಿಯನ್ನು ಸೃಜಿಸುತ್ತವೆ”. (ಕ್ರೊಚೆ: ದಿ ಈಸ್ಟೆಟಿಕ್. 1901/1992 ಪು76). ಒಂದನೆಯ ಬಗೆಯದರಲ್ಲಿ ಮೂಲ ಅಭಿವ್ಯಕ್ತಿಯಿರುತ್ತದೆ, ನಿಜ. ಆದರೆ ಯುಕ್ತ, ಉಚಿತ ಅಭಿವ್ಯಕ್ತಿಯ ಕೊರತೆ ಇದ್ದೇ ಇರುತ್ತದೆ. ಎರಡನೆಯ ಬಗೆಯದರಲ್ಲಿ, ಕ್ರೋಚೆ ಪ್ರಕಾರ, ವಾಸ್ತವವಾಗಿ ಎರಡು ಅಭಿವ್ಯಕ್ತಿ ರೂಪಗಳಾಗುತ್ತವೆ. ಕುವೆಂಪು ಸಾಹಿತ್ಯ ಚಿತ್ರ ಸಂಪುಟಕ್ಕೆ ಸಂಬಂಧಿಸಿ ಹೇಳುವುದಾದರೆ ‘ಕವನ’ ಶಾಬ್ದಿಕರೂಪ, ‘ಚಿತ್ರ’ ದೃಶ್ಯಾತ್ಮಕ ಅಭಿವ್ಯಕ್ತಿ ರೂಪ (ಫಾರಮ್ ಆಫ್ó ವಿಶುಅಲ್ ಎಕ್ಸ್‍ಪ್ರೆಷನ್ಸ್). ಅವುಗಳ ಅಭಿವ್ಯಕ್ತಿ ವಿಧಾನ ಬೇರೆ, ಆಸ್ವಾದನೆಯ ವಿಧಾನವೂ ಅನುಭವವೂ ಬೇರೆಯೇ ಆಗುತ್ತವೆ.

ಮಾಧ್ಯಮ ಮತ್ತು ಅಭಿವ್ಯಕ್ತಿಗಳು ಸಂವೇದನೆಯ ವಿಶಿಷ್ಟತೆಗೆ ಸಂಬಂಧಿಸಿವೆ. ಕ್ರೋಚೆ ಹೇಳುವಂತೆ ಒಂದು ಭಾವ ಅಥವಾ ಅನುಭವ ತನಗೆ ಸೂಕ್ತವಾದ ರೂಪವನ್ನು ಕಲ್ಪನೆಯ, ರಚನೆಯ ಮಟ್ಟದಲ್ಲಿಯೆ ತಳೆಯುತ್ತದೆ. ಆದ್ದರಿಂದ ಪ್ರತಿಭೆ (ಇಮೇಜಿನೇಷನ್) ಸಂವೇದನಾಶಕ್ತಿಯನ್ನು (ಸೆನ್ಸಿಬಿಲಿಟಿ) ಆಧರಿಸಿ ಬೇರೆ ಬೇರೆ ಮಾಧ್ಯಮದಲ್ಲಿ ವ್ಯಕ್ತವಾಗಬಹುದು. ಈ ಶಕ್ತಿ ವೈಶಿಷ್ಟ್ಯದಿಂದ ಒಬ್ಬ ಕವಿಯಾಗುತ್ತಾನೆ, ಒಬ್ಬ ಕಲಾವಿದನಾಗುತ್ತಾನೆ. ಆದರೆ ಅಪೂರ್ವವಾಗಿಯಾದರೂ ಒಬ್ಬನೇ ವ್ಯಕ್ತಿಯಲ್ಲಿ ಪ್ರತಿಭೆಯ ಹಲವು ಮುಖಗಳನ್ನು ಕಾಣಬಹುದು. ಕುವೆಂಪು ಅವರ ಪ್ರತಿಭೆ ಸಾಹಿತ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಕಂಡಿದ್ದರೂ, ಅವರು ಚಿತ್ರ ರಚಿಸಲಿಲ್ಲ, ಸಂಗೀತ ರಚಿಸಲಿಲ್ಲ ಎಂದರೂ ಸಹ ಅವರ ಸಂವೇದನೆಯಲ್ಲಿ ಆ ಮಾಧ್ಯಮಗಳ ಭಾವಾಭಿವ್ಯಕ್ತಿ ಮೌಲ್ಯಗಳು ಇರಲಿಲ್ಲವೆಂದು ಹೇಳುವಂತಿಲ್ಲ. ಸಂವೇದನೆ ವಿಶ್ಲೇಷಣಾತ್ಮಕವಲ್ಲ, ಸಂಶ್ಲೇಷಣಾತ್ಮಕ. ಗ್ರಹಣೇಂದ್ರ್ರಿಯಾನುಭವಗಳು ವಿವಿಕ್ತವಲ್ಲ, ಪ್ರತ್ಯೇಕವಲ್ಲ; ಯಾವುದೇ ಒಂದು ಕಲೆಯ ಗ್ರಹಿಕೆಯಲ್ಲಿ ಸಂಸ್ಕಾರ ಕಾರಣವಾಗಿಯೋ ಸಂವೇದನೆ ಕಾರಣವಾಗಿಯೋ ಇನ್ನೊಂದರ ಅನುಭವ ಕರಗಿರುತ್ತದೆ. ಕುವೆಂಪು ಅವರದು ಬಹುಮುಖೀ ಸಂವೇದನೆ. ಆದ್ದರಿಂದ ಕಲಾವಿದರಿಗೂ ಅದು ಪ್ರೇರಣೆಯಾಗಬಲ್ಲುದು, ಅವರ ಕಲ್ಪನೆ ಹರಿಯಲು ಮೂಲ ಮಾತೃಕೆಯಾಗಬಲ್ಲುದು. ಈ ಸಂಪುಟದ ಹಲವು ಕಲಾಕೃತಿಗಳು ಅದಕ್ಕೆ ದೃಷ್ಟಾಂತವಾಗಿವೆ.

ಸಾಹಿತ್ಯ ಮತ್ತು ದೃಶ್ಯಕಲೆಗಳಲ್ಲಿ ಭಿನ್ನತೆ ಇರುವಂತೆ ಸಮಾನವಾದ ಅಂಶಗಳೂ ಇವೆ. ಸೂಕ್ಷ್ಮಗ್ರಹಿಕೆಯ ಫಲವಾಗಿ ಬರುವ ವಿವರವಾದ ವರ್ಣನಾಶಕ್ತಿ. ಇದು ವರ್ಣನಾತ್ಮಕ ಪ್ರತಿಭೆ. ಕುವೆಂಪು ಅವರಲ್ಲಿ ಕಾಣಬರುವ ಅದ್ಭುತವಾದ ಪ್ರತಿಭೆ ಇದು. ಕಲಾವಿದರಲ್ಲಿ ಸೂಕ್ಷ್ಮ ವಿವರ ಚಿತ್ರಣ ರೂಪದಲ್ಲಿ ಕಾಣಬರುತ್ತದೆ. ಇನ್ನೊಂದು, ಪ್ರತೀಕಾತ್ಮಕ ಪ್ರತಿಭೆ; ಎರಡಕ್ಕೂ ಸಮಾನವಾದುದು. ಕುವೆಂಪು ಅವರು ಮೆಚ್ಚಿದ್ದು ಪ್ರತಿಮಾ ವಿಧಾನದ ಅಭಿವ್ಯಕ್ತಿಯನ್ನು. ಕಾದಂಬರಿಯೂ ಸೇರಿದಂತೆ ನಾಟಕ, ಕವನ, ಮಹಾಕಾವ್ಯ ಈ ಬಗೆಯ ಸೃಷ್ಟಿಗಳೇ ಆಗಿವೆ. ಅಲ್ಲದೆ ಕುವೆಂಪು ಅವರು ಒಂದು ದೃಶ್ಯವನ್ನು ಗ್ರಹಿಸುವಲ್ಲಿ, ವರ್ಣಿಸುವಲ್ಲಿ, ಶಬ್ದಚಿತ್ರಗಳನ್ನು ಕಟ್ಟುವಲ್ಲಿ ದೃಶ್ಯಕಲಾತ್ಮಕತೆಯನ್ನು ತೋರುತ್ತಾರೆ. ಚಿತ್ರಕ ಪ್ರತಿಭೆ (ಪಿಕ್ಟೋರಿಯಲ್ ಇಮೇಜಿನೇಷನ್). ದೃಶ್ಯಾತ್ಮಕ ಪ್ರತಿಭೆ (ವಿಶುಅಲ್ ಇಮೇಜಿನೇಷನ್) ಅವರಲ್ಲಿತ್ತು, ಅದ್ಭುತವಾಗಿ. ಕಲಾವಿದ ಖಂಡೇರಾವ್ ಅವರು, ಮಹಾಕಾವ್ಯದ ವಿರಾಡ್‍ದರ್ಶನ ಭಾಗದಲ್ಲಿ ಬರುವ ಕುವೆಂಪು ಅವರ ವರ್ಣಪ್ರಜ್ಞೆಯನ್ನು ಅಸಾಧಾರಣವಾದದ್ದು ಎಂದರು. ಎಷ್ಟೋ ವೇಳೆ ಆ ಪ್ರಜ್ಞೆಯಲ್ಲಿ ಅನುಭವಗಳ, ಚಿಂತನೆಗಳ ಸಾಹಚರ್ಯೆಯಿಂದ ರೂಪತಳೆಯುವ ಸ್ವಪ್ನಪ್ರತೀಕಗಳು ಪ್ರಜ್ಞಾವಲಯಕ್ಕೆ ಬಂದು ಸಾಹಿತ್ಯ ಭಾಗವಾಗುತ್ತವೆ. ರಾವಣನ ಸ್ವಪ್ನಸಿದ್ಧಿ ಅಂತಹ ಒಂದು ಪ್ರತಿಮೆ. ಚಂದ್ರನಾಥ ಆಚಾರ್ಯರು ಅದನ್ನು ಸುಂದರ ದೃಶ್ಯಾತ್ಮಕ ಕಲಾಕೃತಿಯಾಗಿಸಿದ್ದಾರೆ.

ಈ ಸಂಪುಟದಲ್ಲಿ ಕರ್ನಾಟಕದ ಹಾಗೂ ರಾಜ್ಯದ ಹೊರಗಿನ ನಲವತ್ತೈದು ಕಲಾವಿದರು ಕುವೆಂಪು ಅವರ ಕವನ, ಕಥನಕವನ, ನಾಟಕ, ಕಥೆ, ಕಾದಂಬರಿ, ಪ್ರಬಂಧ, ಖಂಡಕಾವ್ಯ, ಮಹಾಕಾವ್ಯಗಳಿಂದ ಆರಿಸಿದ ಭಾಗಗಳನ್ನು ಚಿತ್ರಗಳಾಗಿ ರಚಿಸಿದ್ದಾರೆ. ಮೈಸೂರು, ಕುಪ್ಪಳಿಗೆ ಹೋಗಿ ನಿಸರ್ಗದೃಶ್ಯಗಳನ್ನು ಜಲವರ್ಣದಲ್ಲಿ ರಚಿಸಿದ್ದಾರೆ. ರೇಖಾಚಿತ್ರ ರಚನೆಯನ್ನೂ ಮಾಡಿದ್ದಾರೆ. ಕಲಾಕೃತಿ ರಚನೆಗೆ ಜಲವರ್ಣ, ತೈಲವರ್ಣ, ಅಕ್ರಿಲಿಕ್ ವರ್ಣ, ಕಂಪ್ಯೂಟರ್ ಸೃಜನೆ, ಮಿಶ್ರಮಾಧ್ಯಮ ಇತ್ಯಾದಿ ಚಿತ್ರಮಾಧ್ಯಮಗಳನ್ನು ಬಳಸಿದ್ದಾರೆ. ಸಾಂಪ್ರದಾಯಕ, ಜಾನಪದ, ವಾಸ್ತವ, ಅಮೂರ್ತ, ಆಕೃತಿಪ್ರಧಾನ ಇತ್ಯಾದಿ ವಿಧಾನ, ತಂತ್ರ, ಶೈಲಿಗಳಲ್ಲಿ ಚಿತ್ರಿಸಿದ್ದಾರೆ. ಹೀಗಾಗಿ, ಚಿತ್ರರಚನೆಯಲ್ಲಿ ಬೆರಗುಗೊಳಿಸುವ ವೈವಿಧ್ಯ ಕಂಡುಬರುತ್ತದೆ. ಚಿತ್ರ ಟಿಪ್ಪಣಿಗಳಲ್ಲಿ ಸಾಹಿತ್ಯ ಸಂದರ್ಭ ಮತ್ತು ಕಲಾಕೃತಿಯ ಬಗ್ಗೆ ಕಿರುಪರಿಚಯವನ್ನು ನೀಡಿದೆ. ಕಲಾವಿದರು ಸಾಹಿತ್ಯವನ್ನು ಆಧರಿಸಿ ಚಿತ್ರಿಸಿದ್ದರೂ ಸಾಂದರ್ಭಿಕ ಚಿತ್ರವಾಗಿಸದೆ ಕವಿಪ್ರತಿಭೆಗೆ ಸಮಾನವಾಗಿ ದೃಶ್ಯರೂಪಿಕೆಗಳನ್ನು (ಮೋಟಿ¥ósï್ಸ), ದೃಶ್ಯಪ್ರತಿಮೆಗಳನ್ನು (ವಿಶುಅಲ್ ಇಮೇಜರಿ) ಸೃಜಿಸಿದ್ದಾರೆ. ಸಂಯೋಜನೆಯ ಸಮಷ್ಟಿ ಅನುಭವ (ಗೆಸ್ಟಾಲ್ಟ್ ಎಕ್ಸ್‍ಪೀರಿಯೆನ್ಸ್) ಮುಖ್ಯ. ಕೆಲವರಿಗೆ ಕುವೆಂಪು ಕೃತಿ ಕಲ್ಪನೆಗೆ ಪ್ರೇರಣೆಯಾಗಿದೆ, ಚಿಮ್ಮು ಹಲಗೆಯಾಗಿದೆ. ಕುವೆಂಪು ಕೃತಿಗೆ ವಿರುದ್ಧ ಎಂಬಂತೆ ಸ್ಪಂದಿಸಿರುವ ರಚನೆಯೂ ಇದೆ. ಈ ವೈವಿಧ್ಯ ಕಾರಣವಾಗಿ ಕೆಲವು ಕಲಾಕೃತಿಗಳ ಬಗ್ಗೆ ಪ್ರಸ್ತಾಪಿಸುವುದು ಅಗತ್ಯ. ಅದರಿಂದ ಚಿತ್ರಗಳನ್ನು ಸಾಹಿತ್ಯಕ್ಕಿಂತ ಭಿನ್ನವಾಗಿ ಗ್ರಹಿಸಬೇಕಾದ ಬಗೆ ಅರಿವಾಗುತ್ತದೆ.

ದಿ. ಪಿ. ಆರ್. ತಿಪ್ಪೇಸ್ವಾಮಿಯವರು ನಿಸರ್ಗ ದೃಶ್ಯಗಳನ್ನು, ದೇವಾಲಯ ಹಾಗೂ ಹಳೆಯ ಸ್ಮಾರಕಗಳನ್ನು ಜಲವರ್ಣದಲ್ಲಿ ಚಿತ್ರಿಸಿರುವ ಪ್ರತಿಭಾವಂತ ಕಲಾವಿದರು. ಕವಿಶೈಲದಿಂದ ಕಾಣುವ ನಿಸರ್ಗದೃಶ್ಯಗಳನ್ನು ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಕುವೆಂಪು ಅವರ ‘ಉದಯರವಿ’ ಮನೆಯಲ್ಲಿ ಅವುಗಳನ್ನು ತೂಗುಹಾಕಲಾಗಿತ್ತು. ಈಚೆಗೆ ಅವು ಕುಪ್ಪಳಿಯ ಸಂಗ್ರಹಾಲಯದಲ್ಲಿ ಪ್ರದರ್ಶಿತವಾಗಿವೆ. ಆ ಕೃತಿಗಳನ್ನು ಮೆಚ್ಚಿದ್ದ ಕುವೆಂಪು ಒಂದೊಂದು ಚಿತ್ರದ ಬಗೆಗೂ ಚೌಪದಿ ಬರೆದಿದ್ದಾರೆ. ಅವರಿಗೆ ಅವು ಮೂಲಾನುಭವವನ್ನು ನೆನಪಿಸುವ ಕಿಟಕಿಗಳು. “ಇದು ಚಿತ್ರಕೃತಿಯಲ್ತೆನಗೆ; ಪ್ರಕೃತಿಗೆ ಗವಾಕ್ಷಮಂ ಕೊರೆದಿಹುದು ವರ್ಣಶಿಲ್ಪಿಯ ಕುಂಚಂ; ‘ಉದಯರವಿ’ ತನ್ನ ಗೋಡೆಯೊಳೆ ತೆರೆದಿದೆ ಕಣ್ಣ ‘ಕುಪ್ಪಳಿಗೆ’; ಬಯಲು ಸೀಮೆಗೆ ಅತಿಥಿ ಬಂದಿದೆ ಮಲೆಯನಾಡು!” ಎಂದಿದ್ದಾರೆ. ಈ ಚಿತ್ರ ಸಂಪುಟದ ರಚನೆಗಳನ್ನು ಕುವೆಂಪು ನೋಡುವಂತಿದ್ದಿದ್ದರೆ ಭಾವಮಗ್ನರಾಗುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ‘ಕೃತ್ತಿಕೆ’ಯ ಸಾನೆಟ್‍ಗಳನ್ನು ಓದಿದವರಿಗೆ ಕುವೆಂಪು ಅವರೊಳಗಿದ್ದ ಕಲಾವಿದನ ಕಲ್ಪನೆಯಾಗಬಹುದು.

ಕವಿಶೈಲದ ದೃಶ್ಯವನ್ನು ಜಲವರ್ಣದಲ್ಲಿ ಪಿ. ಎನ್. ಆಚಾರ್ಯರೂ, ರೇಖಾಚಿತ್ರದಲ್ಲಿ ಜಿ.ಕೆ. ಶಿವಣ್ಣನವರೂ ರಚಿಸಿದ್ದಾರೆ. ಎರಡರಲ್ಲೂ ಕವಿಶೈಲದ ಹಾದಿಯಲ್ಲಿರುವ ಶಿಲಾವiಹಾದ್ವಾರಗಳ ಚಿತ್ರಣವಿದೆ. ಕವಿಶೈಲದ ಈ ಸ್ಮಾರಕಗಳ ಉದ್ಘಾಟನೆ 07-04-2001ರಂದು ನೆರವೇರಿತು. ಈ ಬೃಹತ್ ಶಿಲಾದ್ವಾರಗಳನ್ನು ಕಲ್ಪಿಸಿ ಸೃಜಿಸಿದ ಕಲಾವಿದರು ಕೆ.ಟಿ. ಶಿವಪ್ರಸಾದ್ ಅವರು. ಇಂಗ್ಲೆಂಡಿನಲ್ಲಿ ಪ್ರಾಚೀನ ಕಾಲದ ‘ಸ್ಟೋನ್ ಹಿಂಜಸ್’ ಇವೆ. ಯಾವ ಕಾಲದಲ್ಲಿ ಆ ಬೃಹತ್ ಕಲ್ಲುಗಂಬ ತೊಲೆಗಳನ್ನು ನಿಲ್ಲಿಸಿದರೊ ಖಚಿತವಿಲ್ಲ. ವಿಧಿಯಾಚರಣೆಯ ಭಾಗವಾಗಿದ್ದಿರಬಹುದು ಅಥವಾ ಋತುಮಾನದ ಸಂಕೇತವಿರಬಹುದು. ಕೆ.ಟಿ. ಶಿವಪ್ರಸಾದ್ ಆ ಬಗೆಯ ಸ್ಮಾರಕ ದ್ವಾರಗಳನ್ನು ಕವಿಶೈಲಕ್ಕೆ ಕಲ್ಪಿಸಿದ್ದಾರೆ. ಅವು ಒರಟೊರಟಾಗಿ ಶಿಲೆಯ ಮೈವಳಿಕೆಯನ್ನೇ ಹೊಂದಿವೆ. ಯಾವುದೇ ಅಲಂಕಾರ, ವಿನ್ಯಾಸ ಕೆತ್ತನೆ ಇಲ್ಲ. ಯಾವುದೇ ಒಂದು ಶೈಲಿಯನ್ನು, ಹೊಯ್ಸಳ ವಿಜಯನಗರ ಅಥವಾ ಆಧುನಿಕ ಶೈಲಿ ಅನುಸರಿಸಿ ದ್ವಾರ ರಚಿಸಿದರೂ ಅದು ಕಾಲಬದ್ಧವಾಗುತ್ತದೆ. ಕವಿಶೈಲ ನೈಸರ್ಗಿಕ ಬೆಟ್ಟ, ಬಂಡೆ, ಬಂಡೆಯ ಹಾಸು, ನೆತ್ತಿಗಳಿಂದ ಕೂಡಿದ್ದು, ಸುತ್ತಲೂ ಕಾಡು ಸಹ್ಯಾದ್ರಿ ಶ್ರೇಣಿ. ಇಂತಹ ನೈಸರ್ಗಿಕ ಪರಿಸರಕ್ಕೆ ಹೊಂದುವ ನಿಸರ್ಗಸಹಜ ಶಿಲೆಗಳನ್ನೇ ಕಂಬ-ತೊಲೆಯಾಗಿಸಿ ನಿಲ್ಲಿಸಿದ್ದಾರೆ. ಅದು ಕವಿಶೈಲಕ್ಕೆ ಕೃತಕವಾಗದೆ ಹಿನ್ನೆಲೆಗೆ ಹೊಂದುತ್ತದೆ. ಕಲ್ಲುಬಂಡೆ ಘನ, ದೃಢತೆಯ ಸಾಲಿಡಿಟಿಯ ಸೂಚಕ. ಜಡದಲ್ಲಿ ಚೈತನ್ಯವನ್ನು ಕಂಡವರು ಕುವೆಂಪು. ಶಿಲಾತಪಸ್ವಿಯ ಒಂದು ಚಿತ್ರ ಈ ಸಂಪುಟದಲ್ಲಿದೆ. ಒರಟು ಬಂಡೆಗಂಬಗಳು ಕಾಲಾತೀತತೆಯ ಪ್ರತೀಕವೂ ಆಗುತ್ತವೆ. ಆ ಕಾರಣವೆ ಶಿವಪ್ರಸಾದ್ ಸಹಜಸ್ವರೂಪವನ್ನೆ ದ್ವಾರಕ್ಕೆ ಬಳಸಿಕೊಂಡಿದ್ದಾರೆ. ಕುವೆಂಪು ದರ್ಶನ, ಕುವೆಂಪು ಸಾಹಿತ್ಯ, ಕವಿಶೈಲ ಎಲ್ಲವೂ ಒಂದು ಕಾಲಕ್ಕೆ ಸೀಮಿತವಾದುವಲ್ಲ, ಸಾರ್ವಕಾಲಿಕವಾದುವು ಎಂಬುದನ್ನು ಕಲಾವಿದರ ಕಲ್ಪನೆ ಮೂರ್ತಗೊಳಿಸಿದೆ.

ಎಂ.ಬಿ. ಲೋಹಾರರ ಶಬರಿ ಪ್ರಸಂಗದ ಚಿತ್ರ ಅಲ್ಲಲ್ಲಿ ಶೈಲೀಕೃತ ಎನಿಸಿದರೂ ಪಾಯಿಂಟಲಿಸಮ್‍ಗೆ ಹತ್ತಿರವಾದದ್ದು. ಪ್ರಾಥಮಿಕ ವರ್ಣಗಳ ಚುಕ್ಕಿಚುಕ್ಕಿಗಳ ಮೂಲಕ ಆಕಾರ ಆಕೃತಿ ವರ್ಣಾಂತರಗಳ ಭ್ರಮೆ ತರುವ ಕಲಾವಿದ ಸ್ಯೂರತ್‍ನ ವಿಧಾನ. ಆದರೆ ಇಲ್ಲಿ ಇಂಪ್ರೆಷನಿಸಂ ಕಾಲದ ಆ ಬಗೆ ಇಲ್ಲ. ಆದರೆ ಅದರ ಸಮೀಪ ತಂತ್ರವಾಗಿ ಬಳಕೆಯಾಗಿದೆ. ಎಂ.ವಿ. ಕಂಬಾರರ ‘ಶಿಶುರಾಮ, ಚಂದ್ರ, ಮಂಥರೆ’ ಕೃತಿ ಹಸ್ತಪ್ರತಿ ಚಿತ್ರಗಳ, ಚಿಕಣಿ ಚಿತ್ರಗಳ ಸಂಯೋಜನೆ, ವರ್ಣಯೋಜನೆ ಮತ್ತು ಆಕೃತಿಗಳ ರಚನೆಯನ್ನು ಉಳ್ಳುದಾಗಿದೆ. ಶೈಲೀಕೃತ ಎನಿಸಿದರೂ ಅದರ ಸೌಂದರ್ಯವೂ ಆಕರ್ಷಕ. ಗಾಯತ್ರಿ ದೇಸಾಯಿಯವರ ‘ಇಲ್ಲಿ ಬಾ ಸಂಭವಿಸು’ ಕಲಾಕೃತಿ ಜಾನಪದ ಶೈಲಿಯನ್ನು ಹೋಲುತ್ತದೆ. ರೂಪಿಕೆಗಳು (ಮೋಟಿ¥ósï್ಸ) ಜಾನಪದೀಯವೇ ಆಗಿವೆ. ಇಷ್ಟಾದರೂ ತಲವಿಂಗಡನೆ, ಶೈಲೀಕೃತ ವಿನ್ಯಾಸ, ಮರಗಿಡ ಎಲೆ ಪಕ್ಷಿ ಪ್ರಾಣಿ ಗುಡ್ಡ ಎಲ್ಲ ಶುದ್ಧ ಚಿತ್ರಕರೂಪ ಪಡೆದಿವೆ.

ರವಿಕುಮಾರ್ ಕಾಶಿಯವರ ‘ಹಸುರು’, ಬಾಬು ಈಶ್ವರಪ್ರಸಾದರ ‘ಗಿರಿನೆತ್ತಿಯ ಮಂದಿರದಲಿ’, ಪ್ರದೀಪಕುಮಾರ್ ಅವರ ‘ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರ ಬನ್ನಿ’ ಕಲಾಕೃತಿಗಳು ಬೇರೆಯೇ ವರ್ಗಕ್ಕೆ ಸೇರುತ್ತವೆ. ಜೇಕಬ್‍ಸನ್ ಹೇಳುವ ಅಂತರ-ಸಂಜ್ಞಾ ಭಾಷಾಂತರ ಬಗೆಯವು. ಶಾಬ್ದಿಕ ಮತ್ತು ಅಶಾಬ್ದಿಕ ಅಥವಾ ದೃಶ್ಯಾತ್ಮಕ ಸಂಜ್ಞೆಗಳ ವ್ಯತ್ಯಾಸಗಳನ್ನು ಗಮನಿಸಬಹುದು. ಕ್ರೋಚೆ ಹೇಳುವಂತೆ ವಿಭಿನ್ನ ಅಭಿವ್ಯಕ್ತಿ ರೂಪಗಳಾಗುತ್ತವೆ. ರವಿಕುಮಾರ ಕಾಶಿಯವರ ನಿರ್ವಹಣೆ ವಿಭಿನ್ನವಾದದ್ದು. ಕುವೆಂಪು ‘ಹಸುರು’ ಕವನದಲ್ಲಿ ಕಣ್ಣಿನ ಅನುಭವ ವರ್ಣನೆಯಲ್ಲೆ ಬಹುಇಂದ್ರಿಯಾನುಭವವನ್ನು ಉಂಟುಮಾಡುತ್ತಾರೆ. ಇಂತಹ ಅಭಿವ್ಯಕ್ತಿ ಅಥವಾ ಆಸ್ವಾದನೆಯ ವಿಭಿನ್ನಾನುಭವವನ್ನು `ಬಹುಸಂವೇದನಾನುಭವ’ (ಸಿನಾಸ್ಥೇಶಿಯಾ) ಎನ್ನಲಾಗುತ್ತದೆ. ‘ಅದು ಹುಲ್ಲಿನ ಮಕಮಲ್ಲಿನ ಪೊಸ ಪಚ್ಚೆಯ ಜಮಖಾನೆ’ ಎಂಬ ಸಾಲನ್ನು ರವಿಕುಮಾರ ಕಾಶಿಯವರೂ ಚಿತ್ರದಲ್ಲಿ ಬರೆಹವಾಗಿ ಸೂಚಿಸಿದ್ದಾರೆ. ಕಣ್ಣಿನ ನೋಟದಲ್ಲಿಯೇ ಸ್ಪರ್ಶಾನುಭವವೂ ಉಂಟಾಗುವುದು. ಕವಿಯ ವ್ಯಕ್ತಿತ್ವವೇ ಹಸುರಿನಲ್ಲಿ ಕರಗಿ ಆತ್ಮವೂ ಹಸುರಾಗಿತ್ತು. ಚಿತ್ರ ನೋಡಿದರೆ ಹಸುರು ನಮ್ಮನ್ನು ಆವರಿಸುವಂತಿದೆ. ಕುವೆಂಪು ರೂಪಕಗಳು ಇಲ್ಲಿ ಬೇರೆಯೇ ರೂಪಿಕೆಗಳಿಂದ ಸೂಚಿತವಾಗುತ್ತವೆ. ಚಿಮ್ಮುವ ಹುಡುಗನ ಕಲ್ಪನೆ ಅದ್ಭುತ. ಚೈತನ್ಯಕ್ಕೆ ಮೂರ್ತಸಂಜ್ಞೆಯಾಗುತ್ತದೆ (ಐಕಾನಿಕ್ ಸೈನ್). ಬಾಬು ಈಶ್ವರ ಪ್ರಸಾದರು ಕಾದಂಬರಿಯಲ್ಲಿನ ವರ್ಣನೆಗೆ ಬದಲು ದೃಶ್ಯ ಪ್ರತಿಮೆಗಳನ್ನು (ವಿಶುಅಲ್ ಇಮೇಜಸ್) ಬಳಸಿದ್ದಾರೆ. ಶಾಬ್ದಿಕ ಸಂಜ್ಞೆಗಳಿಗೆ ಬದಲು ಪ್ರತೀಕಾತ್ಮಕ ಸಂಜ್ಞೆಗಳಿವೆ (ಸಿಂಬಾಲಿಕ್ ಸೈನ್ಸ್). ವರ್ಣಯೋಜನೆಯೂ ಸಾಂಕೇತಿಕವಾಗಿದೆ. ಪ್ರದೀಪಕುಮಾರ್ ಅವರು ಕುವೆಂಪು ಅವರ ಬಹುಜನಪ್ರಿಯವಾದ `ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರ ಬನ್ನಿ’ ವೈಚಾರಿಕ ಗೀತೆಗೆ ತಮ್ಮದೇ ಸ್ವತಂತ್ರ, ಮೌಲಿಕ ದೃಶ್ಯಪ್ರತಿಮೆಗಳನ್ನು ಸೃಜಿಸಿ ಅವುಗಳಿಗೆ ಪ್ರತೀಕ ಗುಣಮೌಲ್ಯ ತಂದಿದ್ದಾರೆ. ಯಾರೇ ಪ್ರೇಕ್ಷಕ ಇದು ಆ ಕವನ ಆಧಾರಿತ ಚಿತ್ರವೆಂದರೆ ನಂಬುವುದಿಲ್ಲ. ಇಲ್ಲಿ ಗುಡಿ ಚರ್ಚುಮಸಜೀದಿ ಇತ್ಯಾದಿ ಕವನದಲ್ಲಿ ಬರುವ ಯಾವ ವಿವರವೂ ಇಲ್ಲ. ಆದರೆ ಇಲ್ಲಿರುವ ಪ್ರತಿಮೆ, ಪ್ರತೀಕಗಳನ್ನು ಮತ್ತೆ ಮತ್ತೆ ಪರಿಭಾವಿಸಿದಂತೆ ಅವುಗಳ ಧ್ವನಿ ಸೌಂದರ್ಯ ಅರಿವಾಗತೊಡಗುತ್ತದೆ.

ಬಹುಶಃ ನಮ್ಮಲ್ಲಿ ಮೊದಲಬಾರಿಗೆ ಆ್ಯಂಡಿ ವರ್‍ಹೊಲ್‍ನ ಬಿಂಬಸರಣಿಯ ತಂತ್ರವನ್ನು ಯೂಸುಫ್ ಅರಕ್ಕಲ್‍ರ ‘ಕುವೆಂಪು’ ರಚನೆಯಲ್ಲಿ ಕಾಣುವಂತಾಗಿದೆ. ಹಾಗೆನ್ನಲು ನನ್ನ ಅರಿವಿನ ಮಿತಿಯೂ ಕಾರಣವಿರಬಹುದು. ಏನೇ ಇರಲಿ, ಅದೊಂದು ನೂತನ ಪ್ರಯೋಗ. ಆ ರಚನಾ ತಂತ್ರ ಸರಕು ಸಂಸ್ಕøತಿಯ ಫಲಿತವಾದರೂ, ಇಲ್ಲಿ ಸೌಂದರ್ಯಮೌಲ್ಯಕ್ಕಾಗಿ (ಏಸ್ಥೆಟಿಕ್ ವಾಲ್ಯೂ) ಅದನ್ನು ಬಳಸಿದೆ. ಆ ಬಗ್ಗೆ ವಿವರ ಟಿಪ್ಪಣಿಯಲ್ಲಿ ನೀಡಿದೆ. ಶ್ರೀಮತಿ ರೇಖಾರಾವ್ ಅವರು `ಪ್ರೇತ ಕ್ಯೂ’ ನಂತಹ ಒಂದು ಸಾಂದರ್ಭಿಕ ಕವನವನ್ನೂ ಅಮೂರ್ತಕ್ಕೆ ಸಮೀಪವಾದ ಕಲಾಕೃತಿಯನ್ನಾಗಿಸಿದ್ದಾರೆ. ಕೆಲವು ಶಬ್ದಗಳು ಇಲ್ಲಿ ಮೂರ್ತಸಂಜ್ಞೆಗಳಾಗಿ (ಐಕಾನಿಕ್ ಸೈನ್ಸ್) ಮೂಡಿಬಂದಿವೆ. ಆದರೆ ಒಟ್ಟು ಸಂಯೋಜನೆ ಕಲಾವಿದೆಯ ಸ್ವತಂತ್ರ ಕಲ್ಪನೆಯೇ ಆಗಿದೆ.

ಜೇಕಬ್‍ಸನ್ ಹೇಳುವ ಅಂತರ-ಸಂಜ್ಞಾ ಭಾಷಾಂತರ ಮಾತ್ರವೇ ಆಗದ, ಕ್ರೋಚೆ ಹೇಳುವ ವೈಯಕ್ತಿಕ ಅನಿಸಿಕೆ, ಮನೋಮುದ್ರಿಕೆ ಕರಗಿ ಬೆರೆತು ಮೂಲಕ್ಕಿಂತ ಭಿನ್ನವಾದ ಹೊಸತೊಂದು ಅಭಿವ್ಯಕ್ತಿಯನ್ನು ಸೃಷ್ಟಿಸುವ ಬಗೆಯನ್ನೂ ಮೀರಿದ ಕಲಾರಚನೆಗಳೂ ಇಲ್ಲಿವೆ. ಉತ್ತಮ ದೃಷ್ಟಾಂತವೆಂದರೆ ಶ್ರೀಮತಿ ಸುರೇಖಾ ಅವರ ಎರಡು ಕಲಾಕೃತಿಗಳು. `ಶ್ರೀರಾಮಾಯಣದರ್ಶನಂ’ನಲ್ಲಿ ಬರುವ ಸೀತೆಯ ಅಗ್ನಿಪರೀಕ್ಷಾ ಪ್ರಸಂಗವು ಕಲಾವಿದೆಯ ಆಳವಾದ, ದೃಢವಾದ ವಾಸ್ತವ ಪ್ರಜ್ಞೆ ಅಪೂರ್ವ ದೃಶ್ಯಾತ್ಮಕ ಕಲ್ಪನೆಯಾಗಿ ಅಭಿವ್ಯಕ್ತಿಗೊಳ್ಳಲು ಪ್ರೇರಣೆ ಮಾತ್ರವಾಗಿದೆ. `ದರ್ಶನಂ’ನಲ್ಲಿ ಸೀತೆ ಅಗ್ನಿಚಿತೆ ಪ್ರವೇಶಿಸುತ್ತಿದ್ದಂತೆ ರಾಮನೂ ತಟಕ್ಕನೆ ಅಗ್ನಿಪ್ರವೇಶ ಮಾಡುತ್ತಾನೆ. ಅನಂತರ ಇಬ್ಬರೂ ದಿವ್ಯ ತೇಜೋರೂಪಿಗಳಾಗಿ ಹೊರಬರುತ್ತಾರೆ. ಒಂದು ಸ್ತರದಲ್ಲಿ, ವಿಭೀಷಣನ ಮಗಳು ಅನಲೆ `ಪತಿವ್ರತೆಯನ್ನು ಅಗ್ನಿಪರೀಕ್ಷೆಗೆ ಒಡ್ಡುವುದಿರಲಿ, ರಾಮನನ್ನು ಪರೀಕ್ಷಿಸುವವರು ಯಾರು? ರಾಮನೇನು ದುರಿತ ದೋಷಕೆ ಹೊರತೆ? ಎಂದುಕೊಂಡೆ, ಪೂಜ್ಯೆಯನ್ನು ಪಾಲಿಸುವ ನೆವದಿ ನೀನೂ ಪರೀಕ್ಷೆಗೆ ಒಳಗಾದೆ’ ಎಂದು ಹೇಳುವ ಮಾತು ಸ್ತ್ರೀ ಸಂವೇದನೆಯನ್ನು ಬಿಂಬಿಸುತ್ತದೆ. ಇನ್ನೊಂದು ಸ್ತರದಲ್ಲಿ, ಕುವೆಂಪು ಅವರೆ ಹೇಳುವಂತೆ: “ಸೀತಾರಾಮರ ಅಗ್ನಿಪ್ರವೇಶ ಅತ್ಯಂತ ಔಚಿತ್ಯಪೂರ್ಣವಾದ ಅಂತ್ಯ. ಸೀತಾರೂಪದ ಮತ್ರ್ಯಪ್ರಜ್ಞೆ ದೈವೀಪ್ರಜ್ಞೆಯಾಗಿ ವಿಕಾಸಗೊಂಡದ್ದಕ್ಕೆ ಈ ಪ್ರಸಂಗವೊಂದು ಪ್ರತಿಮೆ. ಲೌಕಿಕ ದೃಷ್ಟಿಯಿಂದ ಶ್ರೀರಾಮನ ಕಳಂಕ ಅಗ್ನಿಪರೀಕ್ಷೆಯಲ್ಲಿ ದಗ್ಧವಾಯಿತೆಂದು ಹೇಳಬಹುದಾದರೂ, ದಿವ್ಯಪ್ರಜ್ಞೆಯ ಯಶೋವಿತಾನದ ವೈಭವವನ್ನಿಲ್ಲಿ ಕಾಣಬಹುದು”. “ದೈವೀಪ್ರಜ್ಞೆ ಮತ್ರ್ಯಪ್ರಜ್ಞೆಯನ್ನು ವಿವಾಹವಾಗಿ, ಅದನ್ನು ತನ್ನಂತೆ ಮಾಡಿಕೊಳ್ಳುತ್ತದೆನ್ನುವಲ್ಲಿ ಮನಃಶಾಸ್ತ್ರೀಯವೂ ಆಧ್ಯಾತ್ಮಿಕವೂ ಆದ ಸಮರ್ಥನೆ ದೊರೆಯುತ್ತದೆ. ದಿವ್ಯಪ್ರಜ್ಞೆಯ ಕಡೆಗೆ ಮತ್ರ್ಯಪ್ರಜ್ಞೆಯನ್ನೆತ್ತುವುದೇ ಪ್ರತಿಯೊಂದು ಅವತಾರದ ಉದ್ದೇಶ”. ಆದ್ದರಿಂದ ಕುವೆಂಪು ಅವರದು ವಾಲ್ಮೀಕಿ ರಾಮಾಯಣ ಕಥೆಯ ಪುನರ್‍ನಿರೂಪಣೆಯಲ್ಲ, ದರ್ಶನದೃಷ್ಟಿಯ ಪುನರ್‍ಸೃಷ್ಟಿ. ಈ ಪ್ರಸಂಗ ಒಂದು ದರ್ಶನ ಪ್ರತಿಮೆಯಾಗಿ ನಿಲ್ಲುತ್ತದೆ. ಸುರೇಖಾ ಅವರ ಕಲಾಕೃತಿ ಶ್ರೀ ರಾಮಾಯಣದರ್ಶನದ ಅಗ್ನಿಪರೀಕ್ಷೆಯ ದೃಶ್ಯಾತ್ಮಕ ವ್ಯಾಖ್ಯಾನವಾಗದೆ ರಾಮಾಯಣ ಮೂಲ ಕಥಾಪ್ರಸಂಗದ ಬೇರೊಂದು ವ್ಯಾಖ್ಯಾನವೇ ಆಗುತ್ತದೆ. ವಾಲ್ಮೀಕಿಯ ರಾಮ, ಕುವೆಂಪು ರಾಮರಿಗಿಂತ ಭಿನ್ನವಾದ ವಾಸ್ತವ ಜಗತ್ತಿನ ರಾಮ, ಪುರುಷರಾಮ. ಜಗತ್ತು ಮಾಯೆಯೆಂದರು ಆಚಾರ್ಯರು. ಆದರೆ ನಾವು ಬದುಕಿರುವವರೆಗೆ ಅದು ಕಟುವಾಸ್ತವ. ಕುವೆಂಪು ಅದನ್ನು ಬಲ್ಲರು. ಅವರ ಕಾದಂಬರಿಗಳಲ್ಲಿ ಹೆಣ್ಣಿನ ದುರಂತ, ಹತ್ಯೆ, ಅತ್ಯಾಚಾರಗಳನ್ನು ಚಿತ್ರಿಸಿದ್ದಾರೆ. `ಕೆರೆಗೆ ಹಾರ’ ದಂತಹ ಜನಪದ ಕಥನ ಕವನ ಪ್ರಸ್ತಾಪಿಸಿ, ಬಸುರಿಯನ್ನು ಬಲಿಗೊಟ್ಟರೆ ನೀರು ಬರುತ್ತದೆಯೆ ಎಂದು ಮೂಢನಂಬಿಕೆಯನ್ನು ಟೀಕಿಸಿದ್ದಾರೆ. ಮಹಾಕಾವ್ಯದ ದರ್ಶನಧ್ವನಿಗೆ, ಸಂರಚನೆಯ ಸಮಗ್ರ ದೃಷ್ಟಿಗೆ ಅದು ಔಚಿತ್ಯಪೂರ್ಣವೆ. ಆದರೆ ವಾಸ್ತವ ಪ್ರಪಂಚ ಬೇರೆ.

“ಕಾವ್ಯಲೋಕ ಈ ಲೋಕ ಆ ಲೋಕಗಳ ನಡುವೆ ಸಂಚರಿಸುವ ಒಂದು ಯಾತ್ರಾ ಜಗತ್. ಅದು ಯಾತ್ರೆಯೂ ಆಗುತ್ತದೆ, ಸೇತುವೂ ಆಗುತ್ತದೆ. ತನ್ನ ಅತ್ಯಂತ ಮಹೋನ್ನತ ಸ್ಥಿತಿಯಲ್ಲಿ ಅದರ ಮುಡಿ ಕೈವಲ್ಯಸತ್ಯದ ನಿರ್ದಿಗಂತ ಸೀಮೆಯಲ್ಲಿ ಆನಂದವಿಹಾರಿಯಾದರೆ ತನ್ನ ಅತ್ಯಂತ ಸಾಮಾನ್ಯಸ್ಥಿತಿಯಲ್ಲಿ ಅದರ ಅಡಿ ಮತ್ರ್ಯಸತ್ಯದ ಮಿತವಲಯದಲ್ಲಿ ಕರ್ಮಕಾರಣ ಸಂಚಾರಿಯಾಗುತ್ತದೆ” ಎನ್ನುತ್ತಾರೆ ಕುವೆಂಪು. ಎಂದರೆ, ಕಲಾಪ್ರಪಂಚ, ವಾಸ್ತವ ಜಗತ್ತುಗಳನ್ನು ನಿಯಂತ್ರಿಸುವ ನಿಯಮಗಳೇ ಬೇರೆ ಬೇರೆ. ವಾಸ್ತವಾನುಭವ ಒಬ್ಬ ಸೃಜನಶೀಲ ಕಲಾವಿದೆಯ ರಚನೆಯಲ್ಲಿ ತಳೆವ ಕಲಾರೂಪವೂ ಕಲಾಸೌಂದರ್ಯಪ್ರಜ್ಞೆಯಿಂದ ನಿಯಂತ್ರಿತವೇ. ಚಿತ್ರಸಂಪುಟದ ಎಲ್ಲ ಕಲಾರಚನೆಗಳಿಗೂ ಕಲಾನಿಯತಿ ಅನ್ವಯವಾಗುತ್ತದೆ.

ಸುರೇಖಾ ಅವರು ಪರಸ್ಪರ ಸಂಬಂಧಿತ ಎರಡು ಕೃತಿಗಳನ್ನು ರಚಿಸಿದ್ದಾರೆ (ಚಿತ್ರ ಸಂಖ್ಯೆ 41, 42). ಮಿಶ್ರಮಾಧ್ಯಮದ ರಚನೆಗಳು. ಚಿತ್ರಪಟಕ್ಕೆ ಸೀರೆ ಮತ್ತು ಸೀರೆಯ ಅಂಚನ್ನೇ ಅಂಟಿಸಿದ್ದಾರೆ. ಮೇಲಿನ ಸೀರೆಯ ಅಂಚಿನಿಂದ ಕೆಳಕ್ಕೆ ರಕ್ತವರ್ಣದ ವರ್ಷಧಾರೆ. ಕೆಳಗೆ ಮಧ್ಯದಲ್ಲಿ ಚಿನ್ನದ ಬಣ್ಣದ ಲೇಪ ಅಗ್ನಿಜಿಹ್ವೆಯಂತೆ. ಕಲಾವಿದೆ ಬಳಸಿರುವ ಪರಿಕರ ಸಾಮಗ್ರಿಯೂ ದೇಶೀಯ ಮಾತ್ರವಲ್ಲ ಪರಂಪರೆಯ ಸಂಕೇತ. ಸೀರೆ ಹೆಣ್ಣಿನ ಸಂಕೇತ. ರಾಮ – ಸೀತೆಯರಿರುವ ಆಲಂಕಾರಿಕ ಅಂಚೂ ಸಹ ಸಾಂಕೇತಿಕ. ಪುರಾಣ – ಇತಿಹಾಸ, ಭೂತ – ವರ್ತಮಾನ ಕಾಲಮಾನಗಳ ಅವಿಚ್ಛಿನ್ನ ಸಾತತ್ಯವೂ ಸೂಚಿತವಾಗುತ್ತದೆ. ರಾಮಾಯಣದಂತಹ ಪುರಾಣಕಾವ್ಯದಿಂದಲೆ ಪ್ರಾರಂಭವಾಗುತ್ತದೆ ಹೆಣ್ಣಿನ ಶೋಷಣೆ, ಅವಮಾನ, ಅತ್ಯಾಚಾರ, ಹತ್ಯೆಗಳು. ಅಂದು ತೊಡಗಿದ ರಕ್ತದ ಮಳೆ ಇಂದಿಗೂ ನಿರಂತರವಾಗಿ ಸುರಿಯುತ್ತಿದೆ. ಆ ಕಾರಣವೇ ಕಲಾವಿದೆ ಬಲಕೆಳ ಅಂಚಿನಲ್ಲಿ ಬರೆಹದ ಚೀಟಿ ಅಂಟಿಸಿದ್ದಾರೆ: “ಕುವೆಂಪುರವರ ಕ್ಷಮೆಯಾಚಿಸಿ. ಸೀತೆಯೊಡನೆ ಅಗ್ನಿಪ್ರವೇಶ ಮಾಡಿದ ನಿಮ್ಮ ರಾಮ ನನ್ನ ಸುತ್ತಮುತ್ತಲೂ ಕಾಣುತ್ತಿಲ್ಲ. ಮೇ ಬಿ ಐ ಕೆನಾಟ್ ರೀಚ್ ಯುವರ್ ರಾಮ”. ಮಹಿಳೆಯೇ ರಾಜ್ಯದ ಮುಖ್ಯಮಂತ್ರಿಯಾದರೂ, ದೇಶದ ಪ್ರಧಾನಿಯಾದರೂ ಹೆಣ್ಣನ್ನು ಜೀವಂತವಾಗಿ ಅಗ್ನಿಚಿತೆಗೇರಿಸುವುದು ತಪ್ಪಿಲ್ಲ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂದು ಶಾಸ್ತ್ರವಾಕ್ಯವನ್ನು ಉದ್ಘೋಷಿಸುತ್ತಲೆ, ಸುಟ್ಟ ಸ್ಥಳದಲ್ಲಿ ಮಂದಿರ ಕಟ್ಟಿಸಿ, ಸ್ಮಾರಕ ಮಾಡಿ, ಮಹಾಸತಿ ಮಾಸತಿ ಮಾಸ್ತಿಯನ್ನಾಗಿ ಮಾಡಿ ಪೂಜಿಸುವ ವಿಪರ್ಯಾಸವೂ ನಡೆಯುತ್ತಿದೆ. ಎರಡನೆಯ ಚಿತ್ರದಲ್ಲಿ ಮೇಲಿನ ರಕ್ತಧಾರೆ ರಕ್ತ ಬಲೆಯಾಗಿ ಪರಿಣಮಿಸಿದೆ. ಅದೂ ಅರ್ಥಪೂರ್ಣ. ಸೀರೆಯ ಕೆಳಅಂಚಿಗೆ ಮೂರು ಚಿತ್ರಸಾಲುಗಳಿವೆ. ಒಂದನೆಯ ಸಾಲು, ರಾಮಧನುರ್ಭಂಗ ಮಾಡುವ ದೃಶ್ಯ. ಎಂದರೆ ಶೌರ್ಯದಿಂದ ಸೀತೆಯನ್ನು ಪಡೆದದ್ದು. ಹೆಣ್ಣು ಒಂದು ವಸ್ತು, ಜಡವಸ್ತು, ಆದ್ದರಿಂದ ವೀರಶುಲ್ಕವಾಗಿ ಸೀತೆಯನ್ನು ಪಡೆದ. ಎರಡನೆಯ ಸಾಲು ಕೈಕೆ – ಮಂಥರೆಯರದು. ರಾಣಿ ಮತ್ತು ಸೇವಕಿಯರು. ಅವರ ಬದುಕೂ ತಿರಸ್ಕಾರ – ದುರಂತಮಯ. ಮೂರನೆಯ ಸಾಲು ಪರಶುರಾಮ – ದಾಶರಥಿರಾಮರದು. ರಾಮ ಸೀತೆಯನ್ನು ಅಗ್ನಿಗೆ ಒಡ್ಡಿದ. ಪರಶುರಾಮ ಹೆತ್ತತಾಯಿಯನ್ನೇ ಹತ್ಯೆಗೈದ. ಚಿತ್ರ ರಚನೆಯ ಭಾಗವಾಗಿ ನಡುವೆ ಪತ್ರಿಕಾ ಸುದ್ದಿಗಳು. ಲೆಕ್ಚ್ಚರರ್ ಸೆಟ್ಸ್ ವೈ¥ósï ಅಬ್ಲೇeóï ಇತ್ಯಾದಿ. ಪುರಾಣಕಾಲದಿಂದ ಇಂದಿನವರೆಗಿನ ಹೆಣ್ಣಿನ ಬವಣೆ ಈ ಚಿತ್ರಗಳಲ್ಲಿ ಕಲಾಪ್ರತಿಮೆಯಾಗಿ ರೂಪ ತಳೆದಿದೆ. ಕಲಾವಿದೆಯ ಸೂಕ್ಷ್ಮ ತೀವ್ರ ಸಂವೇದನೆ ಈ ಬಗೆಯದು. ಕುವೆಂಪು ಅವರದು ಅಧ್ಯಾತ್ಮಿಕತೆಯ ದರ್ಶನ ಪ್ರತಿಮೆಯಾದರೆ, ಈ ರಚನೆಗಳು ಕಟುವಾಸ್ತವಕ್ಕೊಡ್ಡಿದ ಕಲಾಪ್ರತಿಮೆಗಳು.

ಕುವೆಂಪು ಅವರ ವರ್ಣಪ್ರಜ್ಞೆ ಬಗ್ಗೆ ಜೆ. ಎಸ್. ಖಂಡೇರಾವ್ ಅವರ ಅಭಿಪ್ರಾಯ ಹಿಂದೆ ಹೇಳಿದೆ. ‘ಶ್ರೀರಾಮಾಯಣದರ್ಶನಂ’ ಅಂತಿಮ ಅಧ್ಯಾಯ `ಅಭಿಷೇಕ ವಿರಾಡ್ ದರ್ಶನಂ’ ಅನ್ನು ಗ್ರಹಿಸುವುದೇ ಕಷ್ಟಕರ. ಅಮೂರ್ತಚಿಂತನೆ, ಕಲ್ಪನೆಗಳಿವೆ. ಸುಂದರ ಕಾವ್ಯಪ್ರತಿಮೆಗಳಿವೆ. ವೈಜ್ಞಾನಿಕ ಶಬ್ದಚಿತ್ರವಿದೆ. ಒಂದು ಪ್ರತಿಮೆಯನ್ನು ಆರಿಸಿಕೊಂಡು ಖಂಡೇರಾವ್ ಚಿತ್ರಿಸಿದ್ದಾರೆ. ಮೂಲದ ಒಂದು ದರ್ಶನ ಪ್ರತಿಮೆಯನ್ನು ಅನುಸರಿಸಿ ಮೂರ್ತಚಿತ್ರವಾಗಿಸಿದ್ದಾರೆ. ಮೂಲದ ವರ್ಣ ಕಲ್ಪನೆ, ಭವ್ಯದೃಶ್ಯವನ್ನು ಅನುಭವ ಗ್ರಾಹ್ಯವಾಗುವಂತೆ ರಚಿಸಿದ್ದಾರೆ.

ಪ್ರಾರಂಭದಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಯ ಪಾರಂಪರಿಕ ಸಂಬಂಧದ ಬಗ್ಗೆ ಹೇಳಿತಷ್ಟೆ. ಆದರೆ ಈ ಚಿತ್ರ ಸಂಪುಟ ವಿಶಿಷ್ಟವಾದದ್ದು. ಬಹುಶಃ ಭಾರತದ ಯಾವುದೇ ಭಾಷೆಯ ಒಬ್ಬ ಕವಿಯ ಕೃತಿಗಳನ್ನು ಆಧರಿಸಿ ನಲವತ್ತೈದು ಕಲಾವಿದರು ಚಿತ್ರರಚನೆ ಮಾಡಿರುವುದು ಇರಲಾರದು. ಒಂದು ಕೃತಿಗೆ ಹಲವರು ಚಿತ್ರ ರಚಿಸಿರಬಹುದು. ಆದರೆ ಇಲ್ಲಿನ ವೈವಿಧ್ಯ, ವಿಷಯವ್ಯಾಪ್ತಿ, ಮೌಲಿಕತೆ, ಕಲಾತ್ಮಕತೆ ಅಪೂರ್ವವಾದದ್ದು. ಒಂದು ಯುಗದ ಮಹಾಕವಿಯೊಬ್ಬರ ಶತಮಾನೋತ್ಸವ ಆಚರಣೆ ಸಂದರ್ಭಕ್ಕೆ ಉಚಿತವಾದದ್ದು.

ಈ ಸಂಪುಟ ಇಷ್ಟು ಸುಂದರವಾಗಿ ಪ್ರಕಟವಾಗಲು ಹಲವರು ನೆರವಾಗಿದ್ದಾರೆ. ಸಂಪಾದಕ ಮಂಡಲಿಯ ಅಧ್ಯಕ್ಷರೂ, ಗೌರವ ಸಂಪಾದಕರೂ ಆದ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಮುದ್ದುಮೋಹನ್ ಅವರು, ಜಂಟಿ ನಿರ್ದೇಶಕರಾದ ಡಾ|| ಎಸ್. ಆರ್. ಹೊನ್ನಲಿಂಗಯ್ಯನವರು, ಮಂಡಲಿಯ ಸದಸ್ಯರಾದ ಪ್ರಸಿದ್ಧ ಕಲಾವಿದ ಶ್ರೀ ಎಸ್. ಜಿ. ವಾಸುದೇವ್‍ಅವರು, ಕರ್ನಾಟಕ ಲಲಿತ ಕಲಾ ಆಕಾಡೆಮಿಯ ಅಧ್ಯಕ್ಷರಾಗಿದ್ದ ಶ್ರೀ ಪೀಟರ್ ಲೂಯಿಸ್ ಅವರು, ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀ ಎಂ. ಮರಿಶಾಮಾಚಾರ್ ಅವರು ಪ್ರಕಟಣೆಯ ಕಾರ್ಯದಲ್ಲಿ, ಕಲಾವಿದರಿಂದ ಚಿತ್ರರಚನೆ ಮಾಡಿಸಿ ತರಿಸುವಲ್ಲಿ ನೆರವಾಗಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಯೋಜನೆಗೆ ಚಾಲನೆ ನೀಡಿದ ಆಗ ನಿರ್ದೇಶಕರಾಗಿದ್ದ ಶ್ರೀ ವೈ. ಕೆ. ಮುದ್ದುಕೃಷ್ಣ ಅವರನ್ನು ಇಲ್ಲಿ ನೆನೆಯುತ್ತೇನೆ. ಆಗ ಅರವತ್ತೈದು ಕಲಾವಿದರಿಗೆ ಕಲಾಕೃತಿ ರಚನೆಗೆ ವಿನಂತಿ ಮಾಡಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಕೆಲವರು ಕೃತಿ ರಚನೆಮಾಡಿ ಕಳಿಸಲಿಲ್ಲ. ಅವರಿಗೆ ವಹಿಸಿದ್ದ ಕೃತಿವಸ್ತು ಇಲ್ಲಿ ಸೇರದಿದ್ದುದು ಒಂದು ಕೊರತೆಯೆ. ಆದರೂ ವಿಶ್ವಾಸದಿಂದ, ಕುವೆಂಪು ಅವರ ಮೇಲಣ ಅಭಿಮಾನದಿಂದ ನಲವತ್ತೈದು ಕಲಾವಿದರು ಸ್ಪಂದಿಸಿದ್ದಾರೆ. ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ.

ಪ್ರಗತಿ ಪ್ರಿಂಟ್ ಕಮ್ಯುನಿಕೇಷನ್ಸ್‍ನ ಶ್ರೀ ಬಿ. ಎಲ್. ಶ್ರೀನಿವಾಸ ಅವರು ಕಲಾಗ್ರಂಥಗಳ ಮುದ್ರಣದಲ್ಲಿ ಹೆಸರು ಮಾಡಿದ್ದಾರೆ. ಅತ್ಯಂತ ಆಧುನಿಕ ಉಪಕರಣ ಸೌಲಭ್ಯಗಳನ್ನು ಬಳಸಿ ವರ್ಣಚಿತ್ರಗಳಿರುವ ಈ ಗ್ರಂಥವನ್ನು ಸುಂದರವಾಗಿ ಮುದ್ರಿಸಿದ್ದಾರೆ. ಅವರಿಗೆ ಮತ್ತು ಅವರ ಸಿಬ್ಬಂದಿ ವರ್ಗಕ್ಕೆ ನನ್ನ ವಂದನೆಗಳು. ಗ್ರಂಥದ ಪಠ್ಯಭಾಗವನ್ನು ಇಂಗ್ಲಿಷ್‍ಗೆ ಅನುವಾದಿಸಿ ಕೊಟ್ಟಿರುವವರು ಹಿರಿಯರಾದ ಪ್ರೊ|| ಎಲ್. ಎಸ್. ಶೇಷಗಿರಿರಾವ್ ಅವರು ಮತ್ತು ಟಿಪ್ಪಣಿಗಳನ್ನು ಅನುವಾದಿಸಿದವರು ಗೆಳೆಯ ಬಿ. ಆರ್. ವಿಜಯಕುಮಾರ್ ಅವರು. ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.


ಬೆಂಗಳೂರುಎಂ.ಎಚ್. ಕೃಷ್ಣಯ್ಯ
ಡಿಸೆಂಬರ್ – 2004ಪ್ರಧಾನ ಸಂಪಾದಕ

ಕುವೆಂಪು ಸಾಹಿತ್ಯ ಚಿತ್ರ ಸಂಪುಟ
ಸಂಪಾದಕರು : ಪ್ರೊ. ಎಂ. ಎಚ್. ಕೃಷ್ಣಯ್ಯ
ಪ್ರಕಟಣೆ : ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ 2004
ಚಿತ್ರ-ಪರಿವಿಡಿ
ಕ್ರ.ಸಂ ಚಿತ್ರ ಕಲಾವಿದರು
1 ಕುವೆಂಪು ಕೆ.ಎನ್. ರಾಮಚಂದ್ರನ್
2 ಶ್ರೀಮತಿ ಹೇಮಾವತಮ್ಮ ಕುವೆಂಪು ಎಸ್. ಪ್ರಹ್ಲಾದ್
3 ಪ್ರೊ. ಟಿ. ಎಸ್. ವೆಂಕಣ್ಣಯ್ಯ ಎಂ. ಬಿ. ಪಾಟೀಲ್
4 ಮೋಸಸ್ ಮಾಸ್ತರು ವಿಜಯ ಸಿಂಧೂರ್
5 ಕುವೆಂಪು ಯೂಸಫ್ ಅರಕ್ಕಲ್
6 ನೇಗಿಲ ಯೋಗಿ ನಿಜಲಿಂಗಪ್ಪ ಹಾಲ್ವಿ
7 ಶರತ್ಕಾಲದ ಸೂರ್ಯೋದಯದಲಿ ಪಿ ಎಸ್ ಕಡೇಮನಿ
8 ಶಿಲಾತಪಸ್ವಿ ನಿಖಿಲ ರಂಜನ್ ಪಾಲ್
9 ಪೂವಮ್ಮ ಬಿ ಕೆ ಎಸ್ ವರ್ಮ
10 ಮೀಂಚುಳ್ಳಿ ಕಿಶೋರ್ ಕುಮಾರ್
11 ಹಸುರು ರವಿಕುಮಾರ್ ಕಾಶಿ
12 ಜೈ ಭಾರತ ಜನನಿಯ ತನುಜಾತೆ ಎಸ್ ಕೃಷ್ಣಪ್ಪ
13 ದೇವರು ರುಜು ಮಾಡಿದನು ರಾಮದಾಸ್ ಆಡ್ಯಂತಾಯ
14 ಇಲ್ಲಿ ಬಾ ಸಂಭವಿಸು ಶ್ರೀಮತಿ ಗಾಯತ್ರಿ ದೇಸಾಯಿ
15 ದೇವರು – ಪೂಜಾರಿ ಡಿ ಎಚ್ ಸುರೇಶ
16 ಘಂಟಾಕರ್ಣ ಅಮೃತ್ ಸಾಹು
17 ಅಖಂಡ ಕರ್ನಾಟಕ ಪ್ರಭು ಹರಸೂರ್
18 ಪ್ರೇತ ಕ್ಯೂ ಶ್ರೀಮತಿ ರೇಖಾರಾವ್
19 ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎನ್ ಎಸ್ ಪ್ರದೀಪ್ ಕುಮಾರ್
20 ಅನಿಕೇತನ ಎಂ. ಎಸ್. ಮೂರ್ತಿ
21 ಜಲಗಾರ ಬಿ ಜಯರಾಂ
22 ಶೂದ್ರ ತಪಸ್ವಿ ಎ ಎಂ ಪ್ರಕಾಶ್
23 ದಿವ್ಯದರ್ಶನ: ಕಲಿಯುಗ ಮಹಾಕಾವ್ಯ ಬಸವರಾಜ ಎಲ್ ಜಾನಿ
24 ಅಜ್ಜಯ್ಯನ ಅಭ್ಯಂಜನ ಯು ಭಾಸ್ಕರರಾವ್
25 ಪುಟ್ಟಾಚಾರಿ ಶ್ರೀಮತಿ ರೇಣುಕಾ ಮಾರ್ಕಂಡೆ
26 ಧನ್ವಂತರಿಯ ಚಿಕಿತ್ಸೆ ಯು ರಮೇಶ್ ರಾವ್
27 ನಾಯಿಗುತ್ತಿ ಎಸ್ ಶ್ಯಾಮಸುಂದರ್
28 ತಿಮ್ಮಿಯ ಸ್ವಪ್ನಪ್ರಜ್ಞೆ ಎಂ. ಮೋಹನ್
29 ಭಿಲ್ಲವೇಶದ ಶಿವ – ಶರ್ವಾಣಿಯರು ಮೋಹನ ಸಿತನೂರ್
30 ಬಲೀಂದ್ರ ಹೋತ ಬಸವರಾಜ ಮುಸಾವಳಿಗಿ
31 ಕೃಷ್ಣಪ್ಪನ ಹುಲಿಬೇಟೆ ವಿ ವಲ್ಲೀಶ
32 ಗಿರಿನೆತ್ತಿಯ ಮಂದಿರದಲಿ ಬಾಬು ಈಶ್ವರ ಪ್ರಸಾದ್
33 ಅರ್ಜುನ, ಚಿತ್ರಾಂಗದ ಆರ್ ರಾಜ
34 ಶಿಶುರಾಮ, ಚಂದ್ರ, ಮಂಥರೆ ಎಂ. ವಿ. ಕಂಬಾರ್
35 ಶಿಲಾತಪಸ್ವಿನಿ: ಅಹಲ್ಯೆ ವಿ ಹರೀಶ್
36 ಅರಣ್ಯದಲ್ಲಿ ಸೀತೆಯ ಅಡುಗೆ ಪುರುಷೋತ್ತಮ ಅಡವೆ
37 ಶ್ರೀ ರಾಮರುಜೆಯ ಹೀರಿದಳು ಶಬರಿ ಎಂ. ಬಿ. ಲೋಹಾರ್
38 ಕುಂಭ ಕರ್ಣನನ್ ಎಬ್ಬಿಸಂ ದಿಲೀಪಕುಮಾರ್ ಕಾಳೆ
39 ದಶಾನನ ಸ್ವಪ್ನ ಸಿದ್ಧಿ ಕೆ ಚಂದ್ರನಾಥ ಆಚಾರ್ಯ
40 ಗೆಲ್ದೆ ನಾ ರಾಮನಂ, ಸೆರೆವಿಡಿದೆ ತಂದಿಹೆನ್ ಪ ಸ ಕುಮಾರ್
41 ಅಗ್ನಿದಿವ್ಯ 1 ಶ್ರೀಮತಿ ಕೆ ಬಿ ಸುರೇಖ
42 ಅಗ್ನಿದಿವ್ಯ 2 ಶ್ರೀಮತಿ ಕೆ ಬಿ ಸುರೇಖ
43 ಅಭಿಷೇಕ ವಿರಾಡ್ ದರ್ಶನಂ ಜೆ ಎಸ್ ಖಂಡೇರಾವ್
44 ಕುಪ್ಪಳಿ ಮನೆ ಪಿ ಎನ್ ಆಚಾರ್ಯ
45 ಕವಿಶೈಲ ಪಿ ಎನ್ ಆಚಾರ್ಯ
46 ಕವಿಶೈಲದ ಒಂದು ನೋಟ ಪಿ ಎನ್ ಆಚಾರ್ಯ
47 ರಾಮಕೃಷ್ಣಾಶ್ರಮ ಎಂ ಎಸ್ ಚಂದ್ರಶೇಖರ್
48 ಕುಕ್ಕರಹಳ್ಳಿ ಕೆರೆ ಎಂ ಎಸ್ ಚಂದ್ರಶೇಖರ್
49 ಕುಪ್ಪಳಿ ಮನೆ ಜಿ ಕೆ ಶಿವಣ್ಣ
50 ಕವಿಶೈಲದ ಹಾದಿಯಲ್ಲಿ ಜಿ ಕೆ ಶಿವಣ್ಣ
51 ಧ್ಯಾನಶಿಲೆ ಜಿ ಕೆ ಶಿವಣ್ಣ
52 ಕುಪ್ಪಳಿ ಹಾದಿಯಲ್ಲಿ ಕೆರೆ ಜಿ ಕೆ ಶಿವಣ್ಣ
53 ಹಿರೇಕೊಡುಗೆ ಹಾದಿಯಲ್ಲಿ ಜಿ ಕೆ ಶಿವಣ್ಣ